ಹಾಸನ : ಪರಿಸರ ದಿನಾಚರಣೆ ಯಾವುದೇ ಒಂದು ದಿನಕ್ಕೆ ಅಥವಾ ತಿಂಗಳಿಗೆ ಸೀಮಿತಗೊಳ್ಳದೆ ನಿರಂತರವಾಗಿ ಹಬ್ಬದಂತೆ ಆಚರಿಸಬೇಕು. ಸಂಕ್ರಾಂತಿಯಲ್ಲಿ ಮನೆ ಮನೆಗೆ ತೆರಳಿ ಎಳ್ಳು ಬೆಲ್ಲ ಬೀರುವಂತೆ ಆಸಕ್ತ ಸಂಘ ಸಂಸ್ಥೆಗಳು, ಪರಿಸರ ಪ್ರೇಮಿಗಳು ಮನೆ ಮನೆಗೆ ತೆರಳಿ ಸಾರ್ವಜನಿಕರ ಮನವೊಲಿಸಿ ಅವರ ಸಹಕಾರದಿಂದ ಗಿಡಗಳನ್ನು ನೆಡುವುದರ ಮೂಲಕ ಪರಿಸರದ ಬಗ್ಗೆ ಕಾಳಜಿ, ಆಸಕ್ತಿ ಮೂಡಿಸಬೇಕಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಸನ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಅರ್ಚನಾಮೋಹನ್ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಸನ ಜಿಲ್ಲಾ ಮಹಿಳಾ ಘಟಕ ಹಾಗೂ ಸುವರ್ಣ ಲೇಡಿಸ್ ಕ್ಲಬ್ ವತಿಯಿಂದ ಹಾಸನದ ಹೇಮಾವತಿ ನಗರದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಮನೆ ಮನೆಗೆ ತೆರಳಿ ಗಿಡ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಂದು ಮನೆ ಮುಂದೆ ಕೇವಲ ಎರಡೆರಡು ಮರಗಳನ್ನು ಬೆಳೆಸಿದರೆ ಇಡೀ ಬಡಾವಣೆ ಹಸಿರಿನಿಂದ ಕಂಗೊಳಿಸುತ್ತದೆ, ಉತ್ತಮ ಆರೋಗ್ಯವೂ ನಮ್ಮದಾಗುತ್ತದೆ. ನಮ್ಮಂತಹ ಸಂಗ ಸಂಸ್ಥೆಗಳು ಹೀಗೆ ಮನೆ ಮನೆಗೆ ತೆರಳಿ ಹಾಕಿದಂತಹ ಗಿಡಗಳನ್ನು ಮನೆಯ ಪೋಷಕರು ತಮ್ಮ ಮಕ್ಕಳಂತೆಯೇ ಪೋಷಿಸಬೇಕಿದೆ ಹಾಗೆಯೇ ಸಂಘ ಸಂಸ್ಥೆಗಳು ಗಿಡಗಳನ್ನು ಹಾಕಿದರೆ ಮಾತ್ರ ಸಾಲದು ಅವುಗಳ ಬೆಳವಣಿಗೆಯ ಬಗ್ಗೆಯೂ ಗಮನಹರಿಸಬೇಕಿದೆ ಎಂದರು.
ಸುವರ್ಣ ಲೇಡಿಸ್ ಕ್ಲಬ್‍ನ ಜಿಲ್ಲಾಧ್ಯಕ್ಷರಾದ ಹೆಚ್.ವೇದಶ್ರೀರಾಜ್ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಮನೆಯ ಪರಿಸರ ಅವರ ಬಡಾವಣೆಯ ಪರಿಸರವನ್ನು ಹಸಿರಿನಿಂದ ಕೂಡಿರುವಂತೆ ಜಾಗೃತೆವಹಿಸಿದರೆ ನಗರದ ಎಲ್ಲಾ ಬಡಾವಣೆಗಳಲ್ಲೂ ಜಾಗೃತಿ ಉಂಟಾಗುವುದರ ಜೊತೆಗೆ ಉತ್ತಮ ಪರಿಸರವೂ ಸೃಷ್ಟಿಯಾಗುತ್ತದೆ. ನಾವೇ ಹಾಳುಮಾಡಿರುವ ಪರಿಸರವನ್ನು ನಾವೇ ಪುನರ್‍ಸೃಷ್ಠಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಪರಿಸರದ ಹಾನಿಯಿಂದಲೇ ಇಂದು ನಮಗೆಲ್ಲಾ ಭೀಕರ ರೋಗಗಳು, ನಿತ್ಯ ಅನಾರೋಗ್ಯಗಳು ಕಾಡುತ್ತವೆ. ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಇಂಗಾಲದ ಪ್ರಮಾಣ ಹೆಚ್ಚಾದರೆ ಅಸಮತೋಲನವುಂಟಾಗಿ ವಿಕೋಪಗಳಿಗೆ ತುತ್ತಾಗುತ್ತೇವೆ ಆದ್ದರಿಂದ ಪ್ರತಿಯೊಬ್ಬ ಮನುಷ್ಯನೂ ಈ ಹಿನ್ನೆಲೆಯಲ್ಲಿ ಜಾಗೃತರಾಗಬೇಕಿದೆ ಎಂದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಕೆಜೆವಿಎಸ್ ಗೌರವಾಧ್ಯಕ್ಷರಾದ ಎಂ.ಸಿ.ಡೋಂಗ್ರೆ ಮಾತನಾಡಿ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪರಿಸರದ ಕಾಳಜಿ ಕ್ಷೀಣಿಸಿದೆ ಎಂದೇ ಹೇಳಬಹುದು. ಯಾವುದೇ ಒಂದು ಪರಿಸರ ಸಮತೋಲನವಾಗಿರಬೇಕಾದರೆ ನಿರ್ಧಿಷ್ಟವಾದ ಅನುಪಾತವಿರಬೇಕಾಗುತ್ತದೆ. ಕೆನಡಾದಲ್ಲಿ ಪ್ರತಿಮನುಷ್ಯನಿಗೆ 8800 ಮರಗಳಿವೆ, ರಷ್ಯಾದಲ್ಲಿ 4400 ಮರಗಳಿವೆ, ಚೈನಾದಲ್ಲಿ 102 ಮರಗಳಿವೆ ಆದರೆ ಭಾರತದಲ್ಲಿ ಮಾತ್ರ ಒಬ್ಬ ಮನುಷ್ಯನಿಗೆ ಕೇವಲ 24 ಮರಗಳಿವೆ ಎಂಬುದು ಶೋಚನೀಯವಾದುದು. ಜಗತ್ತಿನಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಚೈನಾ 1 : 102 ಇದ್ದರೂ ಪರಿಸರ ಜಾಗೃತಿ ಬಗ್ಗೆ ಗಂಭೀರವಾಗಿ ತಲೆಕೆಡೆಸಿಕೊಂಡಿದೆ. ಆದರೆ ನಮ್ಮ ದೇಶದಲ್ಲಿ 1: 24 ಇದ್ದರೂ ಸರಕಾರವಾಗಲಿ ಸಂಘ ಸಂಸ್ಥೆಗಳಾಗಲೀ ಹೆಚ್ಚಿನ ಸಂಖ್ಯೆಯಲ್ಲಿ ತಲೆಕೆಡಿಸಿಕೊಳ್ಳುತ್ತಿಲ್ಲ ಇಂತಹ ಪರಿಸ್ಥಿತಿಯಲ್ಲಿ ಕೆಜೆವಿಎಸ್ ಮಹಿಳಾ ಘಟಕ ಹಾಗೂ ಸುವರ್ಣ ಲೇಡಿಸ್ ಕ್ಲಬ್ ಎರಡೂ ಮಹಿಳಾ ಸಂಘಟನೆಗಳು ದಿಟ್ಟ ಹೆಜ್ಜೆ ಇಟ್ಟು ಮನೆ ಮನೆಗೆ ತೆರಳಿ ಗಿಡನೆಡುವ ಕಾರ್ಯಕ್ರ ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯವಾದುದು. ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದವರೇ ಮಹಿಳೆಯರು. ಇಂದು ಕೃಷಿ ಹಾಗೂ ಪರಿಸರದ ಕಾಳಜಿ ಮಹಿಳೆಗೆ ಇದ್ದಷ್ಟು ಪುರುಷರಿಗಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕೆಜೆವಿಎಸ್ ಜಿಲ್ಲಾಧ್ಯಕ್ಷರಾದ ಗ್ಯಾರಂಟಿ ರಾಮಣ್ಣ ಪರಿಸರ ಗೀತೆಗಳನ್ನು ಹಾಡಿದರು. ಈ ಸಂದರ್ಭದಲ್ಲಿ ಕೆಜೆವಿಎಸ್ ನಗರ ಘಟಕದ ಅಧ್ಯಕ್ಷರಾದ ಶ್ರೀಮತಿ ಸುಧಾರವಿ, ಮೋಹನ್, ಪರಿಸರ ಪ್ರೇಮಿಗಳಾದ ಗಿರೀಶ್, ಯಲಗುಂದ ಕಾಂತರಾಜ್, ಸುವರ್ಣ ಲೇಡಿಸ್ ಕ್ಲಬ್ ಸದಸ್ಯರಾದ ರೇಖಾ, ರತ್ನ, ಮಂಜುಳಾರಮೇಶ್ ಮುಂತಾದವರು ಉಪಸ್ಥಿತರಿದ್ದರು.

No comments:
Post a Comment