ಹಾಸನ: ಪರಿಸರ ಜೀವನದ ಒಂದು ಅಂಗ, ಪರಿಸರ ಇಲ್ಲದೇ ಯಾರೂ, ಪರಿಸರ ರಕ್ಷಣೆ ಎಲ್ಲರ ಹೊಣೆ ಆದರೆ ನಾವಿಂದು ಈ ಮೂಲಭೂತ ಕರ್ತವ್ಯವನ್ನು ಮರೆತು ವಿಲಾಸಿ ಜೀವನಕ್ಕೆ ತುತ್ತಾಗಿ ಪರಿಸರ ವಿನಾಶಕ್ಕೆ ನೇರ ಕಾರಣರಾಗಿದ್ದೇವೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಸನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರಾದ ಸಿ.ಕೆ.ಹರೀಶ್ ಅಭಿಪ್ರಾಯಪಟ್ಟರು.
ಅವರು ಹಾಸನ ತಾಲ್ಲೂಕಿನ ಬಸವಾಘಟ್ಟ ಸರಕಾರಿ ಪ್ರೌಢಶಾಲೆಯಲ್ಲಿ ಹಾಸನ ತಾಲ್ಲೂಕು ಕೆಜೆವಿಎಸ್ ಘಟಕವು ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಮನುಷ್ಯನ ದುರಾಸೆಯಿಂದ ಪರಿಸರ ನಲುಗಿ ಹೋಗುತ್ತಿದೆ. ಜಗತ್ತಿನ ಎಲ್ಲ ಜೀವಜಂತುಗಳಿಗೆ ಬೇಕಾದ ಜೀವಾನಿಲ ಆಮ್ಲಜನಕವನ್ನು ನೀಡುವುದೇ ಗಿಡಮರಗಳು. ಅವುಗಳೇ ಸಕಲ ಜೀವಿಗಳ ಉಸಿರಿನ ಜೀವನಾಡಿಗಳು, ಹಸಿರನ್ನೇ ನಾವು ನಾಶ ಮಾಡುತ್ತಾ ಸ್ವಾರ್ಥಕ್ಕಾಗಿ ಬಳಸಿಕೊಂಡರೆ ಉಸಿರೇ ಇಲ್ಲದಂತಾಗುತ್ತದೆ. ಇಂದು ಈ ಶಾಲೆಯಲ್ಲಿ ನೆಡಲಾದ ನೂರಾರು ಸಸಿಗಳು ಮುಂದೆ ಮರವಾಗಿ ಸಮಾಜಕ್ಕೆ ಬೆಳಕಾದರೆ ಪರಿಸರ ದಿನದಂತಹ ಆಚರಣೆಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಜಿಲ್ಲಾಧ್ಯಕ್ಷರಾದ ಗ್ಯಾರಂಟಿ ರಾಮಣ್ಣ ಗಿಡಕ್ಕೆ ನೀರೆರೆಯುವುದರ ಮೂಲಕ ಮಾತನಾಡಿ ಅಭಿವೃದ್ಧಿಯ ಹೆಸರಿನಲ್ಲಿ ಇಂದು ಮರ ಗಿಡಗಳ ಮಾರಣಹೋಮ ನಡೆಯುತ್ತಿದೆ. ಅವೈಜ್ಞಾನಿಕತೆಯಿಂದ ಸರಕಾರಗಳು ಅರಣ್ಯ ನಾಶ ಮಾಡಹೊರಟಿವೆ. ಪ್ರಕೃತಿ ವಿಕೋಪಗಳಿಗೆ ನಾವೇ ನೇರವಾಗಿ ಕಾರಣರಾಗುತ್ತೇವೆ. ಮಾನವನ ಅತಿಯಾದ ಲಾಲಸೆ ಜೀವನ ಇಂದು ಪ್ರಕೃತಿಯನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದೆ ಎಂದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಾಸನ ತಾಲ್ಲೂಕಿನ ಗೌರವಾಧ್ಯಕ್ಷರಾದ ಎಸ್.ಆರ್.ವಿನಯ್ ಮಾತನಾಡಿ ಪ್ರಾಣಿ ಸಂಕುಲಗಳಿಗೆ ಗಾಳಿ, ನೀರು, ಬೆಳಕು ಬೇಕೇ ಬೇಕು. ಮಾನವ ಕಾಡನ್ನು ಅತಿಕ್ರಮಿಸಿಕೊಂಡರೆ ಕಾಡು ಪ್ರಾಣಿಗಳೆಲ್ಲಾ ಅಲ್ಲಿಯೂ ನೆಲೆಯಿಲ್ಲದೆ ಅನಿವಾರ್ಯವಾಗಿ ನಾಡಿಗೆ ಬರುತ್ತವೆ. ಆಗ ನಮ್ಮ ಉಳಿವಿಗಾಗಿ ಅವುಗಳನ್ನು ಕೊಲ್ಲಬೇಕಾಗುತ್ತದೆ. ನಾವುಗಳು ಮಾಡಿದ ತಪ್ಪಿಗಾಗಿ ಇನ್ನಾರನ್ನೋ ಬಲಿಕೊಡುವುದು ಎಷ್ಟು ಸರಿ ಎಂಬುದನ್ನು ನಾವಿಂದು ಅರಿಯಬೇಕಾಗಿದೆ ಎಂದರು.
ರಾಜ್ಯ ಸಮಿತಿಯ ಸದಸ್ಯರಾದ ನಾಗರಾಜ್ ಹೆತ್ತೂರ್ ಪ್ರಜಾವಾಣಿಯ ಮಕ್ಕಳ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಶಾಲಾವರಣದಲ್ಲಿ ನೂರಾರು ಗಿಡಗಳನ್ನು ಅತಿಥಿ ಗಣ್ಯರು, ಪೋಷಕರು ಹಾಗೂ ವಿದ್ಯಾಥಿಗಳಿಂದ ನೆಡೆಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕ ಹೆಚ್.ಎಸ್.ರಮೇಶ್ ಸ್ವಾಗತಿಸಿದರು, ಎಂ.ಡಿ.ಕಮಲಾಕ್ಷ ವಂದಿಸಿದರು, ಕೆ.ಕೃಷ್ಣ ನಿರೂಪಿಸಿದರು.

No comments:
Post a Comment